ನಿಶ್ಯಬ್ಧವ ನುಂಗುತ್ತಾ
ಮಾತು ಬರಡಾದಾಗ,
ಉಸಿರು ನಿಶ್ಯಬ್ಧವ ನುಂಗಿತ್ತು
ನೇಸರ ಮೂಡಿದಾಗ,
ಬಾನ್ಮೋಡಗಳ ಕಲರವ ನಿಶ್ಯಬ್ಧವ ನುಂಗಿತ್ತು
ಮಳೆಹನಿ ಬಿದ್ದಾಗ,
ರೋಮಾಂಚನವು ನಿಶ್ಯಬ್ಧವ ನುಂಗಿತ್ತು
ಊರಿನ ತೇರು ಎಳೆದಾಗ,
ಭಕ್ತಿಯ ಉತ್ಸಾಹವು ನಿಶ್ಯಬ್ಧವ ನುಂಗಿತ್ತು
ಮಗು ಹೊಟ್ಟೆಯೊಳಗಿರುವಾಗ,
ತಾಯ್ತನವು ನಿಶ್ಯಬ್ಧವ ನುಂಗಿತ್ತು
ತಾಯಿಯು ಜೊತೆಗಿರುವಾಗ,
ಮಮತೆಯು ನಿಶ್ಯಬ್ಧವ ನುಂಗಿತ್ತು
ಹಸು ಬರದೆ ಹೋದಾಗ,
ಕರುವಿನ ರೋದನವು ನಿಶ್ಯಬ್ಧವ ನುಂಗಿತ್ತು
ಸ್ನೇಹವು ಸುಟ್ಟು ಬೂದಿಯಾದಾಗ,
ಏಕಾಂತದ ನೋವು ನಿಶ್ಯಬ್ಧವ ನುಂಗಿತ್ತು
ಪ್ರೀತಿಯು ಬತ್ತಿದಾಗ,
ಯಾತನೆಯು ನಿಶ್ಯಬ್ಧವ ನುಂಗಿತ್ತು
ಮನವು ಮಂಕಾದಾಗ, ಉಸಿರು ನಿಂತಾಗ, ಜೀವನದ ಮಿಡಿತವು ಬಳಲಿದಾಗ
ನಿಶ್ಯಭ್ಧವು ಆವರಿಸಿತು
ವಾಕ್ಪಟಲದಿಂದ ಹೊರಹೊಮ್ಮದೆ ನಿಂತುಹೋದ ಧ್ವ್ನನಿ ನಿಶ್ಯಬ್ಧವಲ್ಲ
ಮನದಾಳದ ಶೂನ್ಯವು ಜಗವೆಲ್ಲ ಆವರಿಸಿದ ಪರಿಯೇ ನಿಶ್ಯಬ್ಧವು